ಕ್ರಿಯಾ ಪದ ಎಂದರೇನು? |
ಕ್ರಿಯೆಯ ಅರ್ಥವನ್ನು ಸಂಪೂರ್ಣವಾಗಿ ಕೊಡುವ ಪದಗಳು ಕ್ರಿಯಾಪದ ಎನಿಸುತ್ತವೆ. ಕ್ರಿಯಾಪದ ಕರ್ತೃವಿನ ಕಾವ್ಯವನ್ನು ಹೇಳುತ್ತದೆ. ಕನ್ನಡದಲ್ಲಿ ಕಾಲ ಪ್ರತ್ಯಯವನ್ನು ಹಚ್ಚಿದಾಗ ಕರ್ತೃವಿನ ಲಿಂಗ, ವಚನಗಳಿಗೆ ಅನುಗುಣವಾಗಿ ಕ್ರಿಯಾಪದ ವರ್ತಿಸುತ್ತದೆ. ಉದಾ: ರೂಪಳು ನಿನ್ನ ಊರಿಗೆ ಹೋದಳು.
ಭೂಮಿಕಾ ಆಟವನ್ನು ಆಡುವಳು – ಇತ್ಯಾದಿ ಧಾತು : ಕ್ರಿಯಾಪದದ ಮೂಲರೂಪವು ಧಾತು ಎನಿಸುವುದು.
ಉದಾ: ಮಾಡು, ಹೋಗು, ನೋಡು – ಇತ್ಯಾದಿ
ಧಾತುವಿಗೆ ಕಾಲ ಸೂಚಕ ಪ್ರತ್ಯಯ ಹಾಗೂ ಆಖ್ಯಾತ ಪ್ರತ್ಯಯಗಳು ಸೇರಿ ಕ್ರಿಯಾಪದಗಳಾಗುತ್ತವೆ. ಉದಾ: ಕ್ರಿಯಾಪದ = ಧಾತು + ಕಾಲ ಸೂಚಕ ಪ್ರತ್ಯಯ + ಆಖ್ಯಾತ ಪ್ರತ್ಯಯ ಕ್ರಿಯೆಗಳ ಕಾಲ ರೂಪಗಳಲ್ಲದೇ ಅರ್ಥ ರೂಪಗಳೂ ಇರುತ್ತವೆ.
ಕ್ರಿಯಾಪದದ ವಿವಿಧ ರೂಪಗಳು :
ಧಾತುಗಳಿಗೆ ಕಾಲಸೂಚಕ, ಆಗಮಾಕ್ಷರ ಹಾಗೂ ಆಖ್ಯಾತ ಪ್ರತ್ಯಯಗಳು ಸೇರಿ ವಿಧ್ಯರ್ಥಕ, ಸಂಭಾವನಾರ್ಥಕ, ಮತ್ತು ನಿಷೇಧಾರ್ಥಕ ಕ್ರಿಯಾಪದಗಳಾಗುವುವು.
೧. ವಿಧ್ಯರ್ಥಕ ಕ್ರಿಯಾಪದ: ಆಶೀರ್ವಾದ, ಆಜ್ಞೆ, ಹಾರೈಕೆ ಮತ್ತು ಪ್ರಾರ್ಥನಾ ಸ್ವರೂಪವನ್ನು ವ್ಯಕ್ತಪಡಿಸುವುದಕ್ಕೆ ವಿಧ್ಯರ್ಥಕ ಪ್ರತ್ಯಯಗಳು ಸೇರಿದಾಗ ಉಂಟಾಗುವ ಕ್ರಿಯಾಪದ ವಿಧ್ಯರ್ಥಕ ಕ್ರಿಯಾಪದ ಎನಿಸುವುದು. (ಅ) ಆಶೀರ್ವಾದ : ನಾಡಿಗೆ ಶುಭವಾಗಲಿ (ಆಗು + ಅಲಿ = ಆಗಲಿ)
(ಆ) ಆಜ್ಞೆ: ೧. ಮಕ್ಕಳು ಹೊರಗೆ ಹೋಗಲಿ. (ಹೋಗು + ಅಲಿ = ಹೋಗಲಿ)
೨. ನೀನು ಈ ಕಾವ್ಯವನ್ನು ಮಾಡು. (ಮಾ + ಆಡು = ಮಾಡು)
(ಇ) ಪ್ರಾರ್ಥನೆ: ನೀವು ದಯಮಾಡಿ ಬನ್ನಿ,
೨. ನಿಷೇಧಾರ್ಥಕ ಕ್ರಿಯಾಪದ : ಕ್ರಿಯೆ ನಡೆಯಲಿಲ್ಲ ಎಂಬ ಅರ್ಥ ಕೊಡುವ ಧಾತುಗಳಿಗೆ ಆಖ್ಯಾತ ಪ್ರತ್ಯಯ ಸೇರಿದಾಗ ಉಂಟಾಗುವ ಕ್ರಿಯಾಪದ ನಿಷೇದಾರ್ಥಕ ಕ್ರಿಯಾಪದ ಎನಿಸುವುದು.
ಉದಾ:
೧. ರಾಮನು ಶಾಲೆಗೆ ಬಾರನು.
೨. ವಿದ್ಯಾರ್ಥಿಗಳು ಜಗಳವನ್ನು ಆಡರು.
೩. ಸಂಭಾವನಾರ್ಥಕ ಕ್ರಿಯಾಪದ :
ಕ್ರಿಯೆ ನಡೆಯುವಿಕೆಯಲ್ಲಿ ಸಂದೇಹ, ಊಹೆ ತೋರುವ ಧಾತುಗಳಿಗೆ ಆಖ್ಯಾತ ಪ್ರತ್ಯಯ ಸೇರಿದಾಗ ಉಂಟಾಗುವ ಕ್ರಿಯಾಪದ ಸಂಭಾವನಾರ್ಥ ಕ್ರಿಯಾಪದ ಎನಿಸುವುದು.
ಉದಾ:
೧. ಲಕ್ಷ್ಮಿಯು ಬಂದಾಳು.
೨. ನಾನು ಹೋದೇನು.